ಅತ್ತಿದ್ದು ನಕ್ಕಿದ್ದು
ಒಳಗೊಳಗೇ ಬಿಕ್ಕಿದ್ದು
ಮತ್ತೆ ಜಂಜಡಕೆ ಬೀಳಲಾರೆ ಇನ್ನು
ಎಲ್ಲ ಕಲಿಸುವ ಬದುಕು
ಎಲ್ಲ ತಿಳಿಸುವ ಗುರುವು
ದಾಟಬಲ್ಲೆನು ಈಜಿ ನೂರು ಕಡಲು

ಸುಖ-ದುಃಖ ಬರಹವನು
ಬರೆವ ಕೈಗೆ ನಮಿಸಿ
ತಪ್ಪುಸರಿಗಳ ಲೆಕ್ಕ ಒಪ್ಪಿಸಿರುವೆ
ಸಂಚಯದ ಸಂಚಿಯನು
ಕೊಡವಿ ಖಾಲಿ ಮಾಡಿ
ಅಳಿದುಳಿದೆಲ್ಲಾ ಹುರಿದುಬಿಡುವೆ

ಬಾಗಿದಕೆ ಬಳಲಿದಕೆ
ಕೊನೆಯೆಂಬುದೇ ಇಲ್ಲಾ
ಇರಲು ಬೇವು-ಬೆಲ್ಲಾ
ಬಂದುದನು ಬರುವುದನು
ಬಳುವಳಿಯೇ ಎನ್ನುವೆನು
ಬಿಡಲು ಏನೂ ಇಲ್ಲಾ...

ಹಿಂದಣದ ಹೊರೆಯಿಲ್ಲ
ಮುಂದಣದ ಹಂಗಿಲ್ಲ
ಸಮತೆಯ ಸಿರಿಯು ಕಂಗೊಳಿಸಲಿ
ಹೊಸ ಹಸಿರು ಹೊಸ ಉಸಿರು
ಹೊಸ ಕಂಪು ಹೊಸ ತಂಪು
ನಡೆಯ ಎಡೆಯಿರಲಿ ನಿತ್ಯಸತ್ಯತೆಗೆ

ಚಳಿಗಾಳಿ ಮಳೆ ಬಿಸಿಲು
ನರನರಗಳೊಳಗಿಳಿದು
ತೂಗಿ ತೊನೆದಿಹುದು ಜೀವತಾನ
ಹಗಲಿರುಳ ತೆರೆಗಳಲಿ
ಋತುಮಾಸ ಕವಲಿನಲಿ
ಹೊರಳಿ ಸಾಗಿಹುದು ಬಾಳಯಾನ

ಆ ಮುಗಿಲು ಬಿದ್ದಾಗ
ಹಸುರೆದ್ದು ಬಂದಾಗ
ಸುಂದರವು ಸೃಷ್ಟಿಯೆಲ್ಲಾ
ಅಂತರವು ಅಳಿದಾಗ
ನಾ ಕರಗಿ ಹೋದಾಗ
ಅಮೃತವು ಮರ್ತ್ಯವೆಲ್ಲಾ...

- ಕೆ.ಆರ್.ಮಂಗಳಾ